PRAJAVANI NEWS PAPER DT:18-02-2015
ಆರೋಪಪಟ್ಟಿ ಇಲ್ಲದ ಅಮಾನತಿಗೆ ಕಾಲಮಿತಿ
ನವದೆಹಲಿ (ಪಿಟಿಐ): ಆರೋಪಪಟ್ಟಿ ಸಲ್ಲಿಸದ ಹೊರತು ಸರ್ಕಾರಿ ನೌಕರರನ್ನು ಗರಿಷ್ಠ ಮೂರು
ತಿಂಗಳಗಿಂತ ಹೆಚ್ಚು ಕಾಲ ಅಮಾನತ್ತಿನಲ್ಲಿ ಇಡುವಂತಿಲ್ಲ ಎಂದು ಸುಪ್ರೀಂಕೋರ್ಟ್
ಸರ್ಕಾರಕ್ಕೆ ತಾಕೀತು ಮಾಡಿದೆ.
ಸರ್ಕಾರಿ ನೌಕರರ ಅಮಾನತು ಅವಧಿಯನ್ನು ವಿನಾಕಾರಣ ವಿಸ್ತರಿಸುವುದು ನಿಯಮಾವಳಿಯಂತಾಗಿಬಿಟ್ಟಿದೆ
ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ಜಿತ್ ಸೇನ್ ಮತ್ತು ಸಿ. ನಾಗಪ್ಪನ್
ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಒಂದು ವೇಳೆ ನೌಕರರ ಮೇಲಿನ ಆರೋಪ ಸಾಬೀತಾಗದಿದ್ದರೆ
ಅಮಾನತು ಅವಧಿಯಲ್ಲಿ ಅವರು ಅನುಭವಿಸಿರಬಹುದಾದ ಅಪಮಾನ, ನಿಂದನೆ, ಮಾನಸಿಕ ಕಿರುಕುಳ, ಸಮಾಜದ ತಿರಸ್ಕಾರ
ಹಾಗೂ ಇಲಾಖೆಯ ಅಪಹಾಸ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು
ನ್ಯಾಯಮೂರ್ತಿಗಳು ಹೇಳಿದರು.
ಕಾಶ್ಮೀರದಲ್ಲಿ ನಾಲ್ಕು ಎಕರೆ ಜಾಗ ಉಪಯೋಗಿಸಲು ತಪ್ಪಾಗಿ ನಿರಾಕ್ಷೇಪಣಾ ಪತ್ರವನ್ನು
ನೀಡಿದ ಆರೋಪದ ಮೇಲೆ 2011ರಲ್ಲಿ ಅಮಾನತುಗೊಂಡ ಸೇನಾಧಿಕಾರಿ ಅಜಯ್ ಕುಮಾರ್ ಚೌಧರಿ
ಸಲ್ಲಿಸಿದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ಆದೇಶ ಹೊರಡಿಸಿತು.
ಈ ಆದೇಶದ ಆಧಾರದ ಮೇಲೆ ಸೇನಾಧಿಕಾರಿ ತಮ್ಮ ಅಮಾನತು ಕ್ರಮವನ್ನು
ಪ್ರಶ್ನಿಸಬಹುದು ಎಂದು ನ್ಯಾಯಮೂರ್ತಿಗಳು ಹೇಳಿದರು.